ವರನಟನೊಂದಿಗೆ ನಟಿಸುವ ಭಾಗ್ಯ ಪಡೆದರೂ ಕುಟುಂಬದೊಂದಿಗೆ ಬದುಕುವ ಭಾಗ್ಯ ಪಡೆಯದ ಕರುಣಾಮಯಿ!

ಕನ್ನಡದ ಖ್ಯಾತ ಪೋಷಕ ನಟ ಸದಾಶಿವ ಬ್ರಹ್ಮಾವರ ಅವರನ್ನು ಅವರ ಕುಟುಂಬಸ್ಥರು ಮನೆಯಿಂದ ಹೊರ ಹಾಕಿದ್ದು, ಕುಮಟಾದ ಕೆಲ ಯುವಕರು ಅವರನ್ನು ಗುರುತಿಸಿ ಅವರನ್ನು ತಮ್ಮವರಂತೆ ಉಪಚರಿಸಿ ಸಹಾಯ ಮಾಡಿದ್ದು, ಮಾನವೀಯತೆ ಮೆರೆದಿದ್ದಾರೆ.

ಹೌದು, ವರನಟ ಡಾ.ರಾಜ್ ಕುಮಾರ್ ಸೇರಿದಂತೆ ಖ್ಯಾತ ನಟರೊಂದಿಗೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸದಾಶಿವ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರು. ಆದರೆ ಅವರ ಪುತ್ರ ಸದಾಶಿವ ಅವರ ಜೀವನ ಶೈಲಿಯನ್ನು ಕಂಡು ಜಿಗುಪ್ಸೆ ವ್ಯಕ್ತಪಡಿಸಿ ಮನೆಯಿಂದ ಹೊರ ಹಾಕಿದ್ದ. ಇದಕ್ಕೆ ಕುಟುಂಬದ ಇತರರೂ ಕೂಡ ಬೆಂಬಲಿಸಿ ಅವರನ್ನು ಮತ್ತು ಅವರು ಪೂಜಿಸುತ್ತಿದ್ದ ಫೋಟೋಗಳನ್ನೂ ಹೊರ ಎಸೆದರು ಎಂಬುದಾಗಿ ಖುದ್ದು ಅವರೇ ಮಾಹಿತಿ ನೀಡಿದ್ದಾರೆ.

ತರುವಾಯ ಅವರು ಕುಮಟಾ ನಗರಕ್ಕೆ ಆಗಮಿಸಿ ನಗರದ ಬೀದಿಗಳಲ್ಲಿ ಓಡಾಡುತ್ತಿದ್ದರು. ಇದನ್ನು ಕಂಡ ಕೆಲ ಯುವಕರ ಗುಂಪು ಅವರನ್ನು ಗುರುತಿಸಿ, ವಿಚಾರಿಸಿ ಹೋಟೆಲ್ ನಲ್ಲಿ ಕೊಠಡಿ ವ್ಯವಸ್ಥೆ ಮಾಡಿ ಯೋಗಕ್ಷೇಮ ನೋಡಿಕೊಂಡಿರು ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲದೇ ಸದಾಶಿವ ಅವರು ತಾನು ನನಗೆ ತಿಳಿದಿರುವ ಹುಬ್ಬಳ್ಳಿ ಮೂಲದ ಕೆಲ ವ್ಯಕ್ತಿಗಳನ್ನು ಭೇಟಿ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ ಹಿನ್ನೆಲೆ ಅವರಿಗೆ ಮತ್ತೆ ಹುಬ್ಬಳ್ಳಿ ನಗರದ ವರೆಗೂ ಟಿಕೆಟ್ ಕೊಡಿಸಿ ಬೀಳ್ಕೊಟ್ಟರು ಎಂದು ತಿಳಿದು ಬಂದಿದೆ.

ತಮ್ಮ ಪುತ್ರನ ವಿಳಾಸ, ಮನೆಯಿಂದ ಹೊರಹಾಕಲು ಕಾರಣ ಏನು ಎಂಬ ಬಗ್ಗೆ ಮಾಹಿತಿ ನೀಡಲು ಕಲಾವಿದ ಸದಾಶಿವ ಅವರು ನಿರಾಕರಿಸಿದ್ದು, ಪೊಲೀಸರು ತಮ್ಮನ್ನು ಮತ್ತೆ ಮನೆಗೆ ಸೇರಿಸಲು ಅನುವು ಮಾಡಿಕೊಡುತ್ತೇವೆ ಬನ್ನಿ ಎಂದರೂ ಕೂಡ ಸ್ಪಂದಿಸದೇ ಭಾನುವಾರ ಸಂಜೆ ಹುಬ್ಬಳ್ಳಿಯತ್ತ ಮುಖ ಮಾಡಿದರು ಎಂಬಾ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *