ಕುತೂಹಲ ಮೂಡಿಸಿದ ಹೊಸ ಸಂಶೋಧನೆ: ಭೂಮಿಯನ್ನು ಹೋಲುವ ಗ್ರಹ ಪತ್ತೆ!

ವಿಜ್ಞಾನಿಗಳು ಭೂಮಿಯನ್ನು ಹೋಲುವ ಮತ್ತೊಂದು ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.ವಿಶೇಷ ಅಂದರೆ ಭೂಮಿಗೆ ತೀರಾ ಸಮೀಪದಲ್ಲಿಯೇ ಈ ಗ್ರಹವಿದೆ. ಈ ಮೂಲಕ ಭೂಮಿ ಹೊರಗಿನ ಜೀವಿಗಳ ಹುಡುಕಾಟದಲ್ಲಿ ಕುತೂಹಲ ಹೆಚ್ಚಿಸಿದೆ.

ಭೂಮಿಯನ್ನು ಹೊರತುಪಡಿಸಿ, ನಮ್ಮಂತೆಯೇ ಇರುವ ಜೀವಿಗಳು ಇದ್ದಾರಾ? ಹೀಗೊಂದು ಪ್ರಶ್ನೆ ಇಟ್ಟುಕೊಂಡು ಖಗೋಳ ವಿಜ್ಞಾನಿಗಳ ಬಹಳ ಹಿಂದಿನಿಂದಲೂ ಜೀವಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅತ್ಯಾಧುನಿಕ ಉಪಕರಣ, ದೂರದರ್ಶಕಗಳನ್ನು ಇಟ್ಟುಕೊಂಡು ಖಗೋಳ ಪೂರ್ತಿ ಜಾಲಾಡುತ್ತಲೇ ಇದ್ದಾರೆ. ಇದೀಗ ವಿಜ್ಞಾನಿಗಳು ಭೂಮಿಯಷ್ಟೇ ಗಾತ್ರದ, ಭೂಮಿಯಂತೆಯೇ ಸೂರ್ಯನ ಸುತ್ತಾ ಪರಿಭ್ರಮಿಸುವ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. ಇದು ವಿಶ್ವದಲ್ಲಿ ಜೀವಿಗಳ ಹುಡುಕಾಟದ ಮಹತ್ವದ ಮೈಲುಗಲ್ಲು ಎಂಬ ವಿಶ್ಲೇಷಣೆಗಳು ಅದಾಗಲೇ ವಿಜ್ಞಾನ ವಲಯದಲ್ಲಿ ಆರಂಭವಾಗಿದೆ.

‘ಪ್ರಾಕ್ಸಿಮಾ ಬಿ’ ಹೆಸರಿನ ಈ ಗ್ರಹವು ಭೂಮಿಯಿಂದ ನಾಲ್ಕು ಜ್ಯೋತಿರ್ವರ್ಷ (1 ಜ್ಯೋತಿರ್ವರ್ಷ=ಬೆಳಕು ಒಂದು ವರ್ಷದಲ್ಲಿ ಚಲಿಸುವ ದೂರ) ದೂರದಲ್ಲಿದ್ದು ಪ್ರಖ್ಯಾತ ‘ಪ್ರಾಕ್ಸಿಮಾ ಸೆಂಟಾರಿ’ ನಕ್ಷತ್ರಕ್ಕೆ ಸಮೀಪದಲ್ಲಿದೆ. ಹೀಗಂತ ಬ್ರಿಟಿಷ್ ಸಂಶೋಧಕರ ನೇತೃತ್ವದ ಯುರೋಪಿಯನ್ ವಿಜ್ಞಾನಿಗಳ ತಂಡದವರು ‘ನೇಚರ್’ ಜರ್ನಲ್ನಲ್ಲಿ ಪ್ರಬಂಧ ಬರೆದಿದ್ದಾರೆ.ವಿಜ್ಞಾನಿಗಳ ತಂಡ ಕಳೆದ 16 ವರ್ಷಗಳಿಂದ ಮಾಹಿತಿಗಳನ್ನು ಸಂಗ್ರಹಿಸಿದ್ದು, ಚಿಲಿಯಲ್ಲಿರುವ ‘ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ ಟೆಲಿಸ್ಕೋಪ್’ನಿಂದ ಈ ಗ್ರಹವನ್ನು ಪತ್ತೆ ಹಚ್ಚಿದೆ.

ನಕ್ಷತ್ರದಿಂದ ಬರುವ ಬೆಳಕಿನ ಬದಲಾವಣೆಗಳ ಮೂಲಕ ಗ್ರಹ ಇರುವುದನ್ನು ಕಂಡು ಹಿಡಿಯಲಾಗಿದೆ.ಭೂಮಿಯ 1.3 ರಷ್ಟು ದ್ರವ್ಯರಾಶಿ ಹೊಂದಿರುವ ‘ಪ್ರಾಕ್ಸಿಮಾ ಬಿ’ ನಕ್ಷತ್ರ (ಸೂರ್ಯ ರೀತಿ)ಕ್ಕೆ ತೀರಾ ಸಮೀಪದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದು, 11 ದಿನಗಳಲ್ಲಿ ಒಂದು ಸುತ್ತು ಪೂರ್ಣಗೊಳಿಸುತ್ತದೆ ಎಂದು ತಿಳಿದು ಬಂದಿದೆ.ನಕ್ಷತ್ರ ಸೂರ್ಯನಿಗಿಂತ ದುರ್ಬಲವಾಗಿದ್ದು, ‘ಪ್ರಾಕ್ಸಿಮಾ ಬಿ’ ಸೋ ಕಾಲ್ಡ್ ‘ವಾಸಯೋಗ್ಯ ವಲಯದಲ್ಲಿದೆ. ಮಾತ್ರವಲ್ಲ ಅಲ್ಲಿನ ಉಷ್ಣಾಂಶದಲ್ಲಿ ನೀರು ಇರಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಲಂಡನಿನ ಕ್ವೀನ್ಸ್ ಮೇರಿ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಮತ್ತು ಮುಖ್ಯ ಬರಹಗಾರ ಗುಲೆಮ್ ಅಂಗ್ಲುಡಾ ಎಸ್ಕುಡೆ ಸಂಶೋಧನೆಯನ್ನು ‘ಜೀವಮಾನದ ಅನುಭವ’ ಎಂದು ಕರೆದಿದ್ದಾರೆ. “ಈ ಗ್ರಹ ಭೂಮಿಯ ರೀತಿ ಇಲ್ಲ ಎನ್ನಲು ಸಾಧ್ಯವಿಲ್ಲ. ಈವರೆಗಿನ ಸಂಶೋಧನೆಗಳ ಪ್ರಕಾರ ಅಲ್ಲಿನ ಪರಿಸ್ಥಿತಿ ನಮ್ಮದೇ ಭೂಮಿ ಮತ್ತು ಸೌರ ಮಂಡಲದ ವ್ಯವಸ್ಥೆಗಳಂತೆಯೇ ಇದೆ,” ಎಂದು ಜರ್ಮನ್ ವಿಜ್ಞಾನಿ ಅಂಗ್ಸರ್ ರೈನರ್ಸ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *