ಎಐಎಡಿಎಂಕೆ ಬಣಗಳ ವಿಲೀನ: ಇಲ್ಲಿದೆ ಸಂಪೂರ್ಣ ವಿವರ

ತಮಿಳುನಾಡಿನ ಪ್ರಬಲ ಪ್ರಾದೇಶಿಕ ಪಕ್ಷ ಎಐಎಡಿಎಂಕೆಯ ಎರಡೂ ಬಣಗಳು ಇಂದು ಚೆನ್ನೈನ ರಾಯಪೇಟೆಯಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ವಿಲೀನವಾಗಿವೆ. ಹೌದು, ಹಾಲಿ ಸಿಎಂ ಮತ್ತು ಮಾಜಿ ಸಿಎಂ ನೇತೃತ್ವದ ಬಣಗಳ ನಾಯಕರು ಸರ್ವ ಸಮ್ಮತಿಯೊಂದಿಗೆ ವಿಲೀನ ಮಾಡಿಕೊಂಡಿದ್ದಾರೆ.

ಈ ವೇಳೆ ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಪರಸ್ಪರವಾಗಿ ಹಸ್ತಾಲಾಘವ ಮಾಡಿಕೊಂಡರು. ಉಭಯ ಬಣಗಳ ಮುಖಂಡರು ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಓ.ಪನ್ನೀರ್ ಸೆಲ್ವಂ ಹೇಳಿಕೆ:
ತಮ್ಮ ಬಣವನ್ನು ಎಡಪ್ಪಾಡಿ ಪಳನಿ ಸ್ವಾಮಿ ಅವರ ಬಣಕ್ಕೆ ವಿಲೀನ ಮಾಡಿದ ಬಳಿಕ ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ ಅವರು ಮಾತನಾಡಿದರು. ನಾವೆಲ್ಲರರೂ ಕೂಡ ಒಂದೇ, ‘ಅಮ್ಮ’ನ ಮಕ್ಕಳಾಗಿದ್ದೇವೆ. ಅಮ್ಮನ ಆತ್ಮ ಪ್ರೇರಣೆಯೇ ನಮಗೆ ಮತ್ತೊಮ್ಮೆ ಒಂದಾಗಲು ಪ್ರೇರೇಪಿಸಿದೆ. ಈ ಹಿನ್ನೆಲೆ ನಾವು ಮತ್ತೆ ಒಂದಾಗಿದ್ದೇವೆ. ಇನ್ನು ಮುಂದೆ ನಾವೆಲ್ಲರೂ ಕೂಡ ಒಗ್ಗಟ್ಟಾಗಿಯೇ ಇರಲಿದ್ದು, ಪಕ್ಷವನ್ನು ಮರು ಸಂಘಟಿಸಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.

ಓ.ಪನ್ನೀರ್ ಸೆಲ್ವಂ ನಮ್ಮೆಲ್ಲರ ‘ಅಣ್ಣ’: ಪಳನಿ ಸ್ವಾಮಿ
ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ ಅವರ ಬಣವನ್ನು ತಮ್ಮ ಬಣದೊಂದಿಗೆ ವಿಲೀನ ಮಾಡಿಕೊಂಡ ಬಳಿಕ ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಅವರು ಮಾತನಾಡಿದರು. ಈ ವೇಳೆ, ಓ.ಪನ್ನೀರ್ ಸೆಲ್ವಂ ಅವರು ನಮ್ಮೆಲ್ಲರಿಗೂ ಓರ್ವ ಅಣ್ಣ ಇದ್ದಂತೆ. ಅವರ ಮಾರ್ಗದರ್ಶನದಲ್ಲಿಯೇ ಪಕ್ಷವನ್ನು ಮುನ್ನಡೆಸುತ್ತೇವೆ. ಎಂ.ಜಿ.ರಾಮಚಂದ್ರನ್ ಮತ್ತು ಜೆ.ಜಯಲಲಿತಾ ಇಬ್ಬರೂ ಕೂಡ ಪಕ್ಷಕ್ಕಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದರು. ಅವರ ಕನಸನ್ನು ನನಸು ಮಾಡುತ್ತೇವೆ. ಪಕ್ಷದ ಕಾರ್ಯಕರ್ತರ ಆಶಯ ಕೂಡ ಇದೇ ಆಗಿದೆ. ಪಕ್ಷದ ಸಂಚಾಲಕ ಹುದ್ದೆಗೆ ಓ.ಪನ್ನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡಲಾಗಿದ್ದು, ಇನ್ನು ಮುಂದೆ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ. ಸಹ ಸಂಚಾಲಕರಾಗಿ ತಾನು(ಎಡಪ್ಪಾಡಿ ಪಳನಿ ಸ್ವಾಮಿ), ವೈದ್ಯಲಿಂಗಮ್ ಮತ್ತು ಕೆ.ಪಿ.ಮುನಿಸ್ವಾಮಿ ಅವರು ಮುಂದುವರಿಯಲಿದ್ದೇವೆ. ಇದಲ್ಲದೇ 11 ಮಂದಿ ಸದಸ್ಯರ ಸಲಹಾ ಸಮಿತಿಯಲ್ಲಿ ಹಿರಿಯ ಮುಖಂಡರಿದ್ದು, ಅವರ ಸಲಹೆ ಮೇರೆಗೆ ಸರ್ಕಾರ ಮುನ್ನಡೆಯಲಿದೆ. ಇನ್ನು ಮುಂದೆ ಸೆಲ್ವಂ ಅವರು ಡಿಸಿಎಂ ಆಗಿಯೂ ಕೂಡ ಸೇವೆ ಸಲ್ಲಿಸಲಿದ್ದಾರೆ ಎಂದೂ ಘೋಷಿಸಿದರು.

Leave a Reply

Your email address will not be published. Required fields are marked *